ಕೈಪಿಡಿ ಗೋಡೆ

ವೇದಿಕೆ, ಕಡಿದಾದ ದಾರಿ, ಬೋಳುಮಹಡಿ, ಜಗಲಿ, ಸೇತುವೆ ಮುಂತಾದವುಗಳಲ್ಲಿ ಜನರಿಗೆ ರಕ್ಷಣೆ ಒದಗಿಸಲು ಅವುಗಳ ಅಂಚುಗಳಲ್ಲಿ ಕಟ್ಟಿರುವ ಚಿಕ್ಕ ಗೋಡೆ (ಪ್ಯಾರಪಟ್). ವಾಸದ ಮನೆಗಳಲ್ಲಿ ತಾರಸಿಯ ಮೇಲೆ ಅಲಂಕಾರವಾಗಿ ಇಟ್ಟಿಗೆ ಗಾರೆಯ ಕೈಪಿಡಿಗಳನ್ನು ಅನೇಕ ನಮೂನೆಗಳಲ್ಲಿ ಕಟ್ಟುತ್ತಾರೆ. ಮಾಡಿನ ಮೇಲೆ ಬಿದ್ದ ಮಳೆಯ ನೀರು ಸರಾಗವಾಗಿ ಹೊರಗೆ ಹೋಗುವಂತೆ ಕೈಪಿಡಿಯಲ್ಲಿ ಅಲ್ಲಲ್ಲಿ ರಂಧ್ರಗಳನ್ನು ಬಿಟ್ಟು ನೀರು ಸತುವಿನ ಹಾಳೆಯ ಗುಂಡಾದ ಕೊಳವಿಗಳ ಮೂಲಕ ಇಳಿಯುವಂತೆ (ಆದ್ದರಿಂದ ಗೋಡೆಗಳ ಮೇಲೆ ಹರಿಯದಂತೆ) ಮಾಡುತ್ತಾರೆ. ಸೇತುವೆಗಳ ಅಂಚುಗಳಲ್ಲಿನ ಕೈಪಿಡಿ ಗೋಡೆಗಳು ಅನಿವಾರ್ಯವಾಗಿ ಸೇತುವೆಗಳ ಅಂಗಗಳೇ ಆಗಿವೆ. ನೀರಾವರಿಗಾಗಿಯೂ ಕುಡಿಯುವ ನೀರಿಗಾಗಿಯೂ ಕಟ್ಟುವ ಕೆರೆಗಳ ಏರಿಗಳ ಮೇಲೆ ಇಟ್ಟಿಗೆಗಾರೆಯಿಂದ ಕೈಪಿಡಿಗಳನ್ನು ಕಟ್ಟುವುದೇ ರೂಢಿ.  ಈಚೆಗೆ ಭದ್ರಕಾಂಕ್ರೀಟಿನ ಬಳಕೆ ಕೈಪಿಡಿಗಳ ರಚನೆಯಲ್ಲಿ ಸಾಮಾನ್ಯವಾಗುತ್ತಿದೆ.   

 (ಎಚ್.ಸಿ.ಕೆ.)
(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ